ರೆಡ್ಡಿ, ಸಿ ಆರ್
1880-1951. ಶಿಕ್ಷಣತಜ್ಞ, ರಾಜಕೀಯ ಮುತ್ಸದ್ಧಿ, ಪ್ರಬಂಧಕಾರ, ಆರ್ಥಿಕ ಚಿಂತಕ, ಉತ್ತಮ ವಾಗ್ಮಿ, ಕವಿ, ವಿಮರ್ಶಕ, ದೇಶೀಯತೆಯ ಸೊಗಡಿನ, ಸಮಕಾಲೀನ ಪಾಶ್ಚಾತ್ಯಚಿಂತನೆಯ ಪ್ರವೃತ್ತಿಯುಳ್ಳ ಭಾರತೀಯ ವಿದ್ವಾಂಸ. ಇವರ ಪೂರ್ಣಹೆಸರು ಕಟ್ಟಮಂಚಿ ರಾಮಲಿಂಗಾರೆಡ್ಡಿ. ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಕಟ್ಟಮಂಚಿ ಎಂಬ ಹಳ್ಳಿಯಲ್ಲಿ ವಿದ್ವತ್ತಿಗೆ ಹೆಸರಾದ ಕುಟುಂಬದಲ್ಲಿ 1880 ಡಿಸೆಂಬರ್ 10ರಂದು ಜನಿಸಿದರು. ತಂದೆ ಸುಬ್ರಹ್ಮಣ್ಯ ರೆಡ್ಡಿ. ಕಟ್ಟಮಂಚಿ, ಚಿತ್ತೂರುಗಳಲ್ಲಿ ಪ್ರಾಥಮಿಕ, ಪ್ರೌಢ ವಿದ್ಯಾಭ್ಯಾಸವನ್ನೂ ಮದ್ರಾಸಿನ ಕ್ರಿಶ್ಚಿಯನ್ ಕಾಲೇಜಿನಲ್ಲಿ ಬಿ.ಎ. ಪದವಿಯನ್ನೂ (1901) ಪಡೆದು ಕೇಂಬ್ರಿಡ್ಜಿನ ಸೇಂಟ್‍ಜಾನ್ಸ್ ಕಾಲೇಜಿನಲ್ಲಿ ಉನ್ನತ ವ್ಯಾಸಂಗ ಮಾಡಿದರು. ಕೇಂಬ್ರಿಡ್ಜಿನಲ್ಲಿ ರೈಟ್ ಬಹುಮಾನ ಪಡೆದದ್ದಲ್ಲದೆ (1903) ದತ್ತಿ ವಿದ್ವಾಂಸರೂ ಆದರು. ಅಲ್ಲಿಯ ಲಿಬರಲ್ ಕ್ಲಬ್ಬಿನ ಕಾರ್ಯದರ್ಶಿ ಯಾಗಿ ಅನಂತರ ಕೇಂಬ್ರಿಡ್ಜ್ ಯೂನಿಯನ್ನಿನ ಉಪಾಧ್ಯಕ್ಷರಾಗಿದ್ದರು (1905). ಇದಕ್ಕೆ ಆಯ್ಕೆಗೊಂಡ ಭಾರತೀಯರಲ್ಲಿ ಇವರು ಮೊದಲಿಗರು, ಆ ಯೂನಿಯನ್ನಿನ ಸಭೆಗಳಿಗೆ ಲಾಲಾಲಜಪತರಾಯ್, ಗೋಖಲೆ ಮೊದಲಾದವರನ್ನು ಅತಿಥಿ ಭಾಷಣಕಾರರನ್ನಾಗಿ ಆಹ್ವಾನಿಸಿದ ಇವರು ದೇಶಪ್ರೇಮ ತೋರಿದರು.

ಇಂಗ್ಲೆಂಡಿನಿಂದ ಭಾರತಕ್ಕೆ ಹಿಂದಿರುಗಿದ ಮೇಲೆ (1908) ಬರೋಡ ಗಾಯಕ್ವಾಡ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ, ಅನಂತರ ವೈಸ್‍ಪ್ರಿನ್ಸಿಪಾಲ ರಾದರು. ಇಂಗ್ಲಿಷ್ ಸಾಹಿತ್ಯ, ಐರೋಪ್ಯ ಇತಿಹಾಸ, ಭಾರತೀಯ ಅರ್ಥಶಾಸ್ತ್ರ ಬೋಧಿಸುತ್ತಿದ್ದ ಇವರಿಂದ ವಿದ್ಯಾರ್ಥಿಗಳು ಪ್ರಭಾವಿತ ರಾದರು. ಬರೋಡ ಗಾಯಕ್ವಾಡರ ಒತ್ತಾಯದ ಮೇರೆಗೆ ಕೆನಡ, ಜಪಾನ್ ಮತ್ತು ಫಿಲಿಪ್ಪೈನ್ಸ್ ದ್ವೀಪಗಳಿಗೆ ಶೈಕ್ಷಣಿಕ ಪ್ರವಾಸ ಕೈಗೊಂಡಿದ್ದರು.

1909ರಲ್ಲಿ ವಿಶ್ವವಿದ್ಯಾನಿಲಯ ಸುಧಾರಣೆ ಕುರಿತು ಉಪನ್ಯಾಸ ನೀಡಲು ಮೈಸೂರಿಗೆ ಆಹ್ವಾನಿತರಾದ ಇವರನ್ನು ದಿವಾನ್ ಪಿ.ವಿ. ಮಾಧವರಾವ್ ಮೈಸೂರು ರಾಜ್ಯ ಸೇವೆಗೆ ಸೇರಲು ಒತ್ತಾಯಿಸಿದರು. ಬಳಿಕ ಇವರು ಮೈಸೂರು ಮಹಾರಾಜ ಕಾಲೇಜಿನ ಪ್ರಾಧ್ಯಾಪಕರಾದರು. ಮೈಸೂರಿಗೆ ಬಂದ ಪ್ರಾರಂಭದ ಎರಡು ಮೂರು ವರ್ಷಗಳಲ್ಲೇ (1913) ಮೈಸೂರಿನ ಯುವರಾಜರ ಜೊತೆ ಯುರೋಪ್ ಪ್ರವಾಸ ಕೈಗೊಂಡು ಬೇರೆ ಬೇರೆ ದೇಶಗಳ ಶಿಕ್ಷಣ ಸಂಸ್ಥೆಗಳನ್ನು ಸಂದರ್ಶಿಸಿದರು. ಪ್ರಾಚ್ಯ ಹಾಗೂ ಪಾಶ್ಚಾತ್ಯ ಶಿಕ್ಷಣ ವಿಧಾನಗಳ ಬಗೆಗೆ ಸರ್ಕಾರಕ್ಕೆ ಪ್ರತಿನಿಧಿವರದಿ ನೀಡಿದರು. ಸರ್ಕಾರದ ಮನವಿಯ ಮೇರೆಗೆ ಮೈಸೂರು ವಿಶ್ವವಿದ್ಯಾನಿಲಯ ಸ್ಥಾಪಿಸಲು ಯೋಜನೆ ರೂಪಿಸಿ ವರದಿ ತಯಾರಿಸಿದರು (1915). ಬೋಧನೆ, ಸಂಶೋಧನೆ ಮತ್ತು ಕೆಲವು ಕಾಲೇಜುಗಳ ಸೇರ್ಪಡೆಯೊಂದಿಗೆ ಹೊಸ ವಿಶ್ವವಿದ್ಯಾನಿಲಯ ಮೈಸೂರಿ ನಲ್ಲಿ ಅಸ್ತಿತ್ವಕ್ಕೆ ಬಂತು. ಅನಂತರ ಇವರು ಮಹಾ ರಾಜ ಕಾಲೇಜಿನ ಪ್ರಾಂಶುಪಾ ಲರಾದರು (1916-17). ಮಹಾರಾಜ ಕಾಲೇಜಿನ ಕೆಲವು ಹಳೆಯ ವಿಭಾಗಗ ಳಿಗೆ ಹೊಸ ರೂಪ ಕೊಟ್ಟು ಭಾರತೀಯ ಭಾಷೆಗಳ ಹೊಸ ವಿಭಾಗಗಳನ್ನು ಪ್ರಾರಂಭಿಸಿದರು. 1918ರಲ್ಲಿ ಮೈಸೂರು ರಾಜ್ಯಕ್ಕೆ ಉನ್ನತ ಶಿಕ್ಷಣಾಧಿಕಾರಿ ಯಾಗಿ ನೇಮಕಗೊಂಡರು. ಭಾರತೀಯನಿಗೆ ಅದರಲ್ಲೂ ಬೇರೆ ರಾಜ್ಯದವನಿಗೆ ಸಂದ ಅಪರೂಪದ ಗೌರವವಿದು. ಹೊಸ ಹುದ್ದೆಗೆ ಬಂದ ಕೂಡಲೇ ತುಕ್ಕು ಹಿಡಿದಿದ್ದ ಶಿಕ್ಷಣ ವ್ಯವಸ್ಥೆಯನ್ನು ಸುಧಾರಿಸಲು ಶಾಲೆಯಿಲ್ಲದ ಪ್ರತಿಯೊಂದು ಹಳ್ಳಿಯಲ್ಲೂ ಶಾಲೆ ತೆರೆಯುವ ಕಾರ್ಯಕ್ರಮ ಹಮ್ಮಿಕೊಂಡರು. ಶಿಕ್ಷಣಕ್ಕೆ ಸರ್ಕಾರದ ಧನಸಹಾಯ ಹೆಚ್ಚಾಗುವಂತೆ ಮಾಡಿದರು. ಮಹಾತ್ಮಗಾಂಧೀಯವರ ಅಸ್ಪøಶ್ಯತಾ ನಿವಾರಣಾ ಕಾರ್ಯಕ್ರಮಕ್ಕೆ ಮುಂಚೆಯೇ ಇವರು ಹರಿಜರಿಗೆ ಎಲ್ಲ ಶಾಲೆಗಳಲ್ಲೂ ಪ್ರವೇಶಾವಕಾಶ ಕಲ್ಪಿಸಿದರು.

1921ರಲ್ಲಿ ಉನ್ನತ ಶಿಕ್ಷಣಾಧಿಕಾರಿ ಹುದ್ದೆಗೆ ರಾಜೀನಾಮೆ ನೀಡಿ ಮದರಾಸಿನಲ್ಲಿ ರಾಜಕೀಯ ಪ್ರವೇಶಿಸಿದರು. ಮದರಾಸಿನ ವಿಧಾನ ಪರಿಷತ್ತಿಗೆ ಆಯ್ಕೆಗೊಂಡರು (1922). ಅನಂತರ ಆಂಧ್ರಮಹಾಸಭೆಯ ಅಧ್ಯಕ್ಷರಾದರು (1924). ಮೈಸೂರಿನಿಂದ ಮದರಾಸಿಗೆ ಹೋದ ಬಳಿಕ ಅಲ್ಲಿ ಯುನೈಟೆಡ್ ನ್ಯಾಷನಲ್ ಪಕ್ಷ ರೂಪಿಸಿದರು.

1926ರಲ್ಲಿ ಹೊಸದಾಗಿ ಸ್ಥಾಪನೆಗೊಂಡ ಆಂಧ್ರವಿಶ್ವವಿದ್ಯಾಲಯಕ್ಕೆ ವ್ಯವಸ್ಥಾಪಕ ಕುಲಪತಿಯಾಗಿ ನೇಮಕಗೊಂಡು ಅನಂತರ ಕುಲಪತಿಗಳಾದರು (1930). ಸ್ವಾತಂತ್ರ್ಯ ಚಳವಳಿಯಲ್ಲಿ ಪಾಲ್ಗೊಳ್ಳಲು ಕುಲಪತಿ ಸ್ಥಾನಕ್ಕೆ ರಾಜೀನಾಮೆ ನೀಡಿದರು (1935). ಸ್ವಲ್ಪ ಸಮಯದ ಬಳಿಕ ಸ್ಥಳೀಯ ರಾಜಕೀಯಕ್ಕೆ ಇಳಿದು ಚಿತ್ತೂರು ಜಿಲ್ಲಾ ಮಂಡಳಿ ಅಧ್ಯಕ್ಷರಾಗಿ ಆಯ್ಕೆಗೊಂಡರು (1935). ಪುನಃ ಆಂಧ್ರವಿಶ್ವವಿದ್ಯಾಲಯದ ಕುಲಪತಿಯಾದರು (1936). ಅನಂತರ ಅಂತರ ವಿಶ್ವವಿದ್ಯಾಲಯ ಮಂಡಲಿ ಅಧ್ಯಕ್ಷರಾದರು (1937). ಮೈಸೂರು ರಾಜ್ಯದ ಶೈಕ್ಷಣಿಕ ಪರಿಸ್ಥಿತಿಯ ಬಗೆಗೆ ವರದಿ ಸಲ್ಲಿಸಲು ಪುನಃ ಇವರನ್ನು ಮೈಸೂರಿಗೆ ಆಹ್ವಾನಿಸಲಾಯಿತು (1949). ಅದೇ ವರ್ಷ ಇವರನ್ನು ಮೈಸೂರು ವಿಶ್ವವಿದ್ಯಾನಿಲಯದ ಸಹ ಕುಲಾಧಿಪತಿಗಳನ್ನಾಗಿ (ಪ್ರೊ ಛಾನ್ಸಲರ್) ನೇಮಕ ಮಾಡಲಾಯಿತು.

ಇವರು ತೆಲುಗಿನಲ್ಲಿ ಅನೇಕ ಕೃತಿಗಳನ್ನು ರಚಿಸಿದ್ದಾರೆ. ಮುಸಲಮ್ಮ ಮರಣಮು 107 ಪದ್ಯಗಳಿರುವ ಕಥನಗೀತೆ. ಇದು ಮದರಾಸಿನ ಕ್ರಿಶ್ಚಿಯನ್ ಕಾಲೇಜಿನ ವಿದ್ಯಾರ್ಥಿಯಾಗಿದ್ದಾಗ (1899) ಆಂಧ್ರಭಾಷಾಬಿ üರಂಜನಿ ಸಂಘ ಏರ್ಪಡಿಸಿದ್ದ ಸ್ಪರ್ಧೆಗೆ ಬರೆದು ಬಹುಮಾನ ಗಳಿಸಿದ ಕೃತಿ. ಕೆರೆ ಒಡೆದು ಮಹಾಪೂರ ಬಂದಾಗ ಮುಸಲಮ್ಮ ಎಂಬ ಯುವತಿಯನ್ನು ಬಲಿಕೊಡುವುದೇ ಈ ಕೃತಿಯ ವಸ್ತು. ಅರ್ಥಶಾಸ್ತ್ರಮು ಎಂಬ ಕೃತಿಗೆ ಬರೆದ (1911) ಅರ್ಪಣೆಯ ಪದ್ಯಗಳು, ಕವಿತ್ವ ತತ್ತ್ವವಿಚಾರಮುವಿಗೆ (1913) ಬರೆದ ಪೀಠಿಕಾಪದ್ಯಗಳು, ದತ್ತುಪುತ್ರಿಯ ಮದುವೆ (1919) ಸಂದರ್ಭದಲ್ಲಿ ಬೀಳ್ಕೊಡುವಾಗ ಬರೆದ ಅಂಪಕಾಲು ಎಂಬ ಪದ್ಯಗಳು, ತೆಲುಗು ಮಹಾಭಾರತಕ್ಕೆ ಟೀಕುರೂಪದಲ್ಲಿ ಬರೆದ ಭಾರತಪ್ರಶಂಸ-ಇವೆಲ್ಲ ಸೇರಿ ಸುಮಾರು 10 ಪುಟಗಳ ಕವಿತೆಗಳಿವೆ. ನವಯಾಮಿನಿ ಎಂಬ 30 ಪದ್ಯಗಳಿರುವ ಕೃತಿ ಬಿಲ್ಹಣ ಎಂಬ ಗುರುವಿಗೂ ಕಾಶ್ಮೀರದ ಯುವರಾಣಿ ಯಾಮಿನಿಗೂ ನಡೆದ ರಹಸ್ಯ ಪ್ರಣಯದ ಕಥೆ.

ಕವಿತ್ವ ತತ್ತ್ವವಿಚಾರಮು ಎಂಬ ಕೃತಿ ಆಧುನಿಕ ತೆಲುಗು ವಿಮರ್ಶೆಯಲ್ಲಿ ಒಂದು ಮೈಲುಗಲ್ಲು. ಪಾಶ್ಚಾತ್ಯ ವಿಮರ್ಶಾ ಪದ್ಧತಿಯಿಂದ ಪ್ರಭಾವಿತರಾಗಿ ಈ ವಿಮರ್ಶಾಕೃತಿಯನ್ನು ರಚಿಸಿದ್ದಾರೆ. ವ್ಯಾಸಮಂಜರಿ ಬೇರೆಯವರ ಕೃತಿಗಳಿಗೆ ಬರೆದ ಪೀಠಿಕೆ ಅಥವಾ ಮುನ್ನುಡಿ ಹಾಗೂ ಭಾಷಣಗಳಿರುವ ಪ್ರಬಂಧ ಸಂಕಲನ.

ಭಾರತ ಅರ್ಥಶಾಸ್ತ್ರಮು ಕೃತಿ ಮೇಲುನೋಟಕ್ಕೆ ಭಾರತದ ಅರ್ಥಶಾಸ್ತ್ರವನ್ನು ಕುರಿತಾದ ಗ್ರಂಥವಾದರೂ ಭಾರತೀಯ ಸಮಾಜದ ಸಂಪ್ರದಾಯವನ್ನು ಕುರಿತ ವ್ಯಾಖ್ಯಾನ. 1909-12ರ ಅವಧಿಯಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳಿಗೆ ನೀಡಿದ ಉಪನ್ಯಾಸಗಳೇ ಈ ಕೃತಿಗೆ ಮೂಲ. ಸಾಮಾಜಿಕ ವಿಜ್ಞಾನದ ಅಭಿವ್ಯಕ್ತಿ ಮಾಧ್ಯಮವಾಗಿ ತೆಲುಗನ್ನು ಬಳಸುವುದರಲ್ಲೂ ಇದು ಪ್ರಥಮ ಹಾಗೂ ಗಂಭೀರ ಪ್ರಯತ್ನ. ಹಿಂದೂ ಪದ್ಧತಿಯ ಯೋಚನಾ ಸರಣಿಯ ಆಧಾರದಿಂದ ಸಾಂಪ್ರದಾಯಿಕ ಭಾರತೀಯ ಸಮಾಜವನ್ನು ಕುರಿತ ವಿಮರ್ಶೆ ಇದರಲ್ಲಿದೆ.
ಇವರು ಕೇಂಬ್ರಿಜ್‍ನ ರೈಟ್ ಬಹುಮಾನ (1903), ಆಂಧ್ರ ವಿಶ್ವವಿದ್ಯಾಲಯದ ಡಾಕ್ಟರ್ ಆಫ್ ಲೆಟರ್ಸ್ ಗೌರವ (1938), ಬ್ರಿಟಿಷ್ ಸರ್ಕಾರದಿಂದ ಸರ್ ಬಿರುದು (1942) ಗಳನ್ನು ಪಡೆದಿದ್ದಾರೆ. ಇವರು 1951 ಫೆಬ್ರವರಿ 24ರಂದು ಮದರಾಸಿನಲ್ಲಿ ನಿಧನರಾದರು.

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ
	
	(ಆರ್.ವಿ.ಎಸ್.ಎಸ್.)